ಚೆಂಗಾಳ್ವ -
ಕೊಡಗು, ಹಾಸನಜಿಲ್ಲೆಯ ಕೆಲವು ಭಾಗಗಳು, ಮೈಸೂರು ಜಿಲ್ಲೆ-ಈ ಪ್ರದೇಶದಲ್ಲಿ ಕ್ರಿ.ಶ. 11ನೆಯ ಶತಮಾನದಿಂದ ರಾಜ್ಯಾಡಳಿತ ನಡೆಸುತ್ತಿದ್ದ ಕಿರಿಯ ಅರಸು ಮನೆತನ. ಈ ಮನೆತನದ ಅರಸರು ಆಳುತ್ತಿದ್ದ ಪ್ರದೇಶ ಚೆಂಗನಾಡೆನಿಸಿತು.

	ಇದುವರೆಗೆ ತಿಳಿದಿರುವಂತೆ ಈ ಮನೆತನದ ಮೊದಲ ಅರಸ ನನ್ನಿ ಚೆಂಗಾಳ್ವ, ರಾಜೇಂದ್ರ ಚೋಳನೆಂದು ಕರೆದುಕೊಂಡಿರುವ ಈತ ಬಹುಶಃ ಚೋಳರಿಗೆ ಸೋತು, ಅವರು ಮಾಂಡಲಿಕನಾಗಿರಲು ಒಪ್ಪಿಕೊಂಡಂತೆ ತೋರುತ್ತದೆ. 1034ರಿಂದ ಸುಮಾರು 45 ವರ್ಷಗಳ ಕಾಲ ಅಧಿಕಾರದಲ್ಲಿದ್ದ. ಈತ ಹನಸೋಗೆಯ ಜೈನಬಸದಿಯನ್ನು ಜೀರ್ಣೋದ್ಧಾರ ಮಾಡಿದ. 1090ರ ಶಾಸನದಲ್ಲಿ ಉಕ್ತನಾದ ನಿಗಳಂಕ ಮಲ್ಲ ಮಾದೆಯರಸ ಚೆಂಗಾಳ್ವ, ಶಾಸನದ ಮಹಾದೇವ (ಮಾಧವಣ್ಣ) ಆಗಿರಬಹುದೆಂದು ಊಹಿಸಲಾಗಿದೆ. ಕೊಡಗು ಜಿಲ್ಲೆಯ 13ನೆಯ ಶತಮಾನದ ಶಾಸನಗಳಲ್ಲಿ ಹೆಸರಿಸಲಾಗಿರುವ ಮುನಿವರಾದಿತ್ಯ. ಮಲ್ಲಿದೇವ ಮತ್ತು ಹರಿಹರದೇವರು ಚೆಂಗಾಳ್ವರೆಂದು ಭಾವಿಸಲಾಗಿದೆ. ಆದರೆ ಇವರಲ್ಲಿ ಮುನಿವರಾದಿತ್ಯ ಚೆಂಗಾಳ್ವನೆಂಬುದು ಸಂದೇಹಾಸ್ಪದ. ಮಲ್ಲಿದೇವನನ್ನು ಕುಲೋತ್ತುಂಗ ಚೋಳವೀರ ಚೆಂಗಾಳ್ವನೆಂದು ಹಾಸನ ಜಿಲ್ಲೆಯ ಶಾಸನವೊಂದರಲ್ಲಿ ಕರೆಯಲಾಗಿದೆ. ಈತನ ಮಗ ಹರಿಹರದೇವ. ಮಲ್ಲಿದೇವನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಹರಿಹರದೇವನೂ ರಾಜ್ಯಭಾರದಲ್ಲಿ ತಂದೆಯೊಡನೆ ಭಾಗವಹಿಸಿದ್ದ. 1296ರ ಶಾಸನದಲ್ಲಿ ಇವನನ್ನು ಹರಿಹರದೇವ ಚೋಳದೇವನೆಂದು ಸಂಬೋಧಿಸಲಾಗಿದೆ. ಆದರೆ ಇದಕ್ಕೂ ಮೊದಲಿನ (1252) ಶಾಸನದಲ್ಲಿ ತುಂಗಚೋಳ ವೀರ ಚೆಂಗಾಳು ಸೋಮದೇವ ಬೊಪ್ಪ ದೇವರಸರು ರಾಜ್ಯಭಾರ ಮಾಡುತ್ತಿದ್ದರು ಎಂದು ಹೇಳಿದೆ. ಇವರ ಪರಸ್ಪರ ಸಂಬಂಧ ತಿಳಿಯದು. ತಂದೆ-ಮಗ ಆಗಿರಬಹುದು.

	ಆರಂಭದಲ್ಲಿ ಚೋಳರ ಸಾಮಂತರಾಗಿದ್ದರು, ಬಹುಕಾಲ ಹೊಯ್ಸಳರ ವಿರೋಧಿಗಳಾಗಿದ್ದ ಚೆಂಗಾಳ್ವರು 13ನೆಯ ಶತಮಾನದ ಅಂತ್ಯದಲ್ಲಿ ಹೊಯ್ಸಳರ ಸಾಮಂತರಾಗಿರಲು ಒಪ್ಪಿಕೊಂಡರು. ಸೋಮದೇವ-ಬೊಪ್ಪದೇವರು ಈ ಸಾಮಂತ ವರ್ಗಕ್ಕೆ ಸೇರಿದವರು.

	ಅನಂತರ ಸುಮಾರು 150 ವರ್ಷಗಳ ಕಾಲದ ಇವರ ಇತಿಹಾಸ ತಿಳಿಯದು. 1544ರ ಶಾಸನದಲ್ಲಿ ಈ ವಂಶದ ಶ್ರೀಕಂಠರಸನೆಂಬೊಬ್ಬನ ಉಲ್ಲೇಖವಿದೆ. ನಮಗೆ ಕಾಣಿಸುವ ಇನ್ನೊಬ್ಬ ಚೆಂಗಾಳ್ವ ನಂಜುಂಡ ಅಥವಾ ನಂಜ. ಈತನ ಶಾಸನಗಳಲ್ಲಿ ಇವನ ಪೂರ್ವಜರಾದ ಪಿರಿಯಣ್ಣ ರಂಗ ಮತ್ತು ನಾಗಣ್ಣರ ಉಲ್ಲೇಖವಿದೆ. ಈ ನಂಜರಾಜನೇ ಕೊಡಗಿನ ನಂಜರಾಜಪಟ್ಟಣವನ್ನು ಸ್ಥಾಪಿಸಿದವನೆಂದು ತೋರುತ್ತದೆ. ಪೆರಿಯಾಪಟ್ಟಣ ಈ ಅರಸರ ರಾಜಧಾನಿಯಾಗಿತ್ತು.

	ಈ ಮನೆತನದ ಕೊನೆಯ ಅರಸ ವೀರರಾಜಯ್ಯ. 17ನೆಯ ಶತಮಾನದ ಮಧ್ಯಭಾಗದಲ್ಲಿ ಈತನನ್ನು ಮೈಸೂರಿನ ಅರಸನಾದ ಕಂಠೀರವ ನರಸರಾಜ ಒಡೆಯ ಸೋಲಿಸಿದ. ವೀರರಾಜಯ್ಯ ಈ ಅವಮಾನವನ್ನು ತಾಳಲಾರದೆ ತನ್ನ ಹೆಂಡಿರು ಮಕ್ಕಳನ್ನೆಲ್ಲ ಕೊಂದು ತಾನು ವೀರಸ್ವರ್ಗ ಪಡೆದ. ಇವನೊಂದಿಗೆ ಚೆಂಗಾಳ್ವರ ಮನೆತನ ಅಸ್ತಂಗತವಾಯಿತು.
(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ